Sign up | Login | Font Help

ಆಧ್ಯಾತ್ಮ-ಧರ್ಮ

ಆಧ್ಯಾತ್ಮ-ಧರ್ಮ


ಇನ್ನು ಮುಂದೆ ಇತಿಹಾಸದ ಪುನರಾವೃತ್ತಿ ಇಲ್ಲ!


ಬೆಂಗಳೂರು, ಜೂನ್ ೧೧: ಇತಿಹಾಸದ ಪುನರಾವೃತ್ತಿಗಾಗಿ ಕಾಯುತ್ತಿರುವವರಿಗೆ ಒಂದು ಎಚ್ಚರಿಕೆ: ಇತಿಹಾಸ ಮತ್ತೆ ಮತ್ತೆ ಮರುಕಳಿಸುವುದನ್ನು ನಿಲ್ಲಿಸಲಾಗಿದ್ದು, ಇನ್ನು ಮುಂದೆ ಅದರ ಪುನರಾವರ್ತನೆಯಾಗುವುದಿಲ್ಲ.  ಮುಂದೆ ಓದಿ »

ಮಜಾವಾಣಿ: ಶಿಕ್ಷಣ ವಾಣಿ

"ಈ ಪ್ರಪಂಚದಲ್ಲಿ ಸಾವೊಂದೇ ನಿಶ್ಚಿತ"
(ಮಜಾವಾಣಿ ಬ್ಯೂರೋ ವರದಿ)

ದೊಂಬಲೂರು, ಫೆಬ್ ೧೧: "ಈ ಪ್ರಪಂಚದಲ್ಲಿ ಸಾವು ಎಲ್ಲರಿಗೂ ನಿಶ್ಚಿತ. ನೀವೀಗ ಎಷ್ಟೋ ಕನಸುಗಳನ್ನು ಕಾಣುತ್ತಿರಬಹುದು. ಮಹಾನ್ ವಿಜ್ಞಾನಿಯಾಗುವ ಕನಸು, ಖ್ಯಾತ ಚಿತ್ರ ತಾರೆಯಾಗುವ ಕನಸು, ವಿಶ್ವ ಕಪ್‌ ಫೈನಲ್ಲಿನಲ್ಲಿ ವಿನ್ನಿಂಗ್ ರನ್ ಹೊಡೆಯುವ ಕನಸು. ನಿಮ್ಮಲ್ಲಿ ಬಹುಪಾಲು ಮಂದಿಗೆ ಇಂತಹ ಕನಸುಗಳು ಕನಸುಗಳಾಗೇ ಉಳಿಯುತ್ತವೆ. ಆದರೆ ಒಂದು ಮಾತ್ರ ಖಂಡಿತ. ಒಂದಲ್ಲ ಒಂದು ದಿನ ನೀವು ಸಾಯುವುದು ನಿಶ್ಚಿತ" ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಧರ್ಮರಾಜಯ್ಯನವರು ಹೇಳಿದ್ದಾರೆ.  ಮುಂದೆ ಓದಿ »

ಬ್ರೇ-ಕಿಂಗ್ ನ್ಯೂಸ್: ಆತ್ಮ ಸೌಂದರ್ಯ ಸ್ಪರ್ಧೆ?


ಆತ್ಮ ಸೌಂದರ್ಯ ಸ್ಪರ್ಧೆ?

ಬೆಂಗಳೂರು, ಮೇ ೨, ೨೦೦೬: ಭಾರತೀಯರು ಆತ್ಮ ಸೌಂದರ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮಾಜಿ ರೈಲ್ವೇ-ಸಚಿವ ಸಿ.ಕೆ.ಜಾಫರ್ ಷರೀಫ್ ಅವರು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲೇ, ಆತ್ಮ ಸೌಂದರ್ಯ ವರ್ಧಕ ಪ್ರಸಾಧನಗಳ ತಯಾರಕರಾದ ದೀಪಕ್ ಚೋಪ್ರಾ, ಶ್ರೀ ಶ್ರೀ ರವಿ ಶಂಕರ್ ಮುಂತಾದವರು ವಿಶ್ವ ಆತ್ಮ-ಸೌಂದರ್ಯ ಸ್ಪರ್ಧೆ ಏರ್ಪಡಿಸಲು ಯೋಜಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.  ಮುಂದೆ ಓದಿ »

ಬಾಲ ಗ್ರಹ - ಕಿರಿಯರ ಅಂಕಣ

[ನಮ್ಮ ಪತ್ರಿಕೆಗೆ ಮಕ್ಕಳ ಬಗ್ಗೆ ಕಾಳಜಿ ಮೊದಲಿನಿಂದಲೂ ಇದ್ದೇ ಇದೆ. -- ಆದರೆ ಮಕ್ಕಳ ಮಕ್ಕಳ ಮೇಲಿಲ್ಲ, ಏಕೆಂದರೆ ಮಕ್ಕಳಿಗೆ ಮಕ್ಕಳಾಗುವುದು ಸೂಕ್ತವಲ್ಲ -- ಆದರೂ ಸಹ ಇಂದಿನ ವರೆಗೆ ನಮ್ಮ ಪತ್ರಿಕೆಯಲ್ಲಿ ಮಕ್ಕಳಿಗಾಗಿಯೇ ಒಂದು ಅಂಕಣವಿರಲಿಲ್ಲ. ಆ ಕೊರತೆಯನ್ನು ನಿವಾರಿಸಲು, "ಬಾಲ ಗ್ರಹ" ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ. ಈ ಅಂಕಣದಿಂದ ವಿಶ್ವಾದ್ಯಂತ ಇರುವ ನಮ್ಮ ಓದುಗರ ಸಂಖ್ಯೆ ಮೂರರಿಂದ ಮೂರೂವರೆಗೆ ಏರುವ ನಂಬಿಕೆ ನಮಗಿದೆ. -ಸಂಪಾದಕ]  ಮುಂದೆ ಓದಿ »

ಆರೋಗ್ಯ ಭಾಗ್ಯ:ಪ್ರಾಣಿಕ್ ಸ್ಟೀಲಿಂಗ್

ಪ್ರಾಣಿಕ್ ಸ್ಟೀಲಿಂಗ್. ಬಹಳಷ್ಟು ಜನ ಈ ಚಿಕಿತ್ಸೆಯ ಹೆಸರು ಕೇಳಿರಲಿಕ್ಕಿಲ್ಲ. ಹಾಗಿದ್ದರೆ ಇದೆಂಥ ಚಿಕಿತ್ಸೆ ಎಂದು ಕುತೂಹಲ ಮೂಡುವುದು ಸಹಜ. ಮನುಷ್ಯ ಕೇವಲ ಮೂಳೆ, ಮಾಂಸ ಮಾಡಲ್ಪಟ್ಟ ಭೌತಿಕ ಶರೀರವಲ್ಲ. ಆತನ ಒಳಗೆ ಮತ್ತು ದೇಹದ ಸುತ್ತ ವ್ಯಾಪಿಸಿರುವ ಪ್ರಾಣ ತುಂಬಿದ ಸೂಕ್ಷ್ಮ ಶರೀರವೊಂದಿದೆ. ಈ ಶರೀರವೇ ಪ್ರಾಣಮಯ ಶರೀರ.

"ನಾನು ಹತಾಶ", "ನಾನು ಮುಗ್ಧ" ಅಥವಾ "ನಾನು ಪೆದ್ದ" ಎಂದು ಸಾರಿ-ಸಾರಿ ಹೇಳುವ ಈ ಪ್ರಾಣ ಶಕ್ತಿಯನ್ನು ಗುರುತಿಸಿ ಚೌರ್ಯ ಮಾಡುವ ವಿಧಾನವೇ "ಪ್ರಾಣಿಕ್ ಸ್ಟೀಲಿಂಗ್". ೪೦ಕ್ಕೂ ಹೆಚ್ಚು ದೇಶಗಳಲ್ಲಿ ಚಾಲ್ತಿಯಲ್ಲಿರುವ ಈ ಪದ್ಧತಿಯನ್ನು ಕಂಡು ಹಿಡಿದವನು ಫಿಲಿಪ್ಪೀನ್ಸ್‌ನ ಚೋಅ(ರ) ಕ್ರೂಕ್ ಸೂಯಿ.  ಮುಂದೆ ಓದಿ »

ಟಿಕೆಟ್ಟಿಗೂ ಕಾಸಿಲ್ಲದ ದಟ್ಟ ದೈನೇಸಿ ಬದುಕು

ಜೀವನದಲ್ಲಿ ಎಲ್ಲರೂ ಒಮ್ಮೆಯಾದರೂ ಇಂತಹ ಪ್ರಸಂಗ ಎದುರಿಸಿರುತ್ತಾರೆ. ಎಲ್ಲಾ ಇರುತ್ತೆ. ಆದರೆ ಏನೂ ಇರಲ್ಲ. ವಿದ್ಯೆ, ರೂಪ, ಯೌವ್ವನ, ಜನಬಲ, ಧನಬಲ ಎಲ್ಲಾ ಇದ್ದರೂ ಅವೆಲ್ಲಾ ಒಣ ಪ್ರತಿಷ್ಠೆಗಳಾಗಿ ಬಿಡುತ್ತವೆಯೇ ಹೊರತು, ಒಂದು ಸೆಕೆಂಡ್ ಕ್ಲಾಸ್ ರೈಲು ಟಿಕೆಟ್ ಕೊಡಿಸಲೂ ಅನುಪಯುಕ್ತವಾಗುತ್ತವೆ.

ಯಾಕೋ ಏನೋ ರಿಯೋ ವಿಮಾನ ನಿಲ್ದಾಣದಲ್ಲಿ ಕಾಲಿಡುತ್ತಿದ್ದಂತೆಯೇ ಅಮಾರ್ತ್ಯ ಸೆನ್ ನೆನಪಾದರು. ಆತನ ಜೀವನದ ದೃಶ್ಯಗಳು ನನ್ನ ಮನಸ್ಸಿನಲ್ಲಿ ನಾನಿನ್ನೂ ನೋಡಬೇಕಿರುವ ಸತ್ಯಜಿತ್ ರೇಯವರ ಚಿತ್ರಗಳಂತೆ ಒಂದೇ ಸಮನೆ ಹಾದು ಹೋದವು.

ಅಂದು ಅಮಾರ್ತ್ಯ ಸೆನ್ ಹೌರಾ ರೈಲು ನಿಲ್ದಾಣಕ್ಕೆ ಕಾಲಿಟ್ಟಾಗ ಆತನ ಬಳಿ ನೊಬೆಲ್ ಪ್ರಶಸ್ತಿ ಇರಲಿಲ್ಲ. ಆತನ ಹೆಸರು ಯಾರಿಗೂ ಗೊತ್ತಿರಲಿಲ್ಲ. ಮಲಗಲು ಬೆರ್ತ್ ಇರಲಿ ಕೂಡಲೂ ಒಂದು ಸೀಟ್ ಸಹ ಇರಲಿಲ್ಲ. ಕ್ರೆಡಿಟ್ ಕಾರ್ಡ್ ಬಿಟ್ಟರೆ ಜೇಬಿನಲ್ಲಿ ಕಾಸಿರಲಿಲ್ಲ. ಆಗಷ್ಟೇ ತಿರುಪತಿಯಿಂದ ಬಂದಿದ್ದರಿಂದ ತಲೆಯಲ್ಲಿ ಕೂದಲೂ ಇರಲಿಲ್ಲ. ಆದರೆ, ಅವಷ್ಟನ್ನು ಬಿಟ್ಟರೆ, ಆತನಲ್ಲಿ ಎಲ್ಲವೂ ಇತ್ತು. ಆತ ಅರ್ಥ ಶಾಸ್ತ್ರದಲ್ಲಿ ಕೇಂಬ್ರಿಡ್ಜಿನಿಂದ ಪಡೆದ ಡಾಕ್ಟರೇಟ್ ಡಿಗ್ರೀ ಇತ್ತು. ಕಲಕತ್ತಾ, ದೆಹಲಿ, ಲಂಡನ್, ಹಾರ್ವರ್ಡ್‌ಗಳಲ್ಲಿ ಅರ್ಥಶಾಸ್ತ್ರ ಕಲಿಸಿದ್ದ ಅನುಭವವಿತ್ತು. 'ದಾರಿದ್ರ್ಯ ಮತ್ತು ಬರ' ವಿಷಯವಾಗಿ ತಾನೇ ಸ್ವತ: ಖುದ್ದಾಗಿ ಬರೆದಿದ್ದ ಪುಸ್ತಕವಿತ್ತು. ಹೆಂಡತಿ, ಮಕ್ಕಳು ಇದ್ದರು.  ಮುಂದೆ ಓದಿ »

ಮಜಾವಾಣಿ ಸಂದರ್ಶನ: ಶ್ರೀ ಶ್ರೀ ರವಿಶಂಕರ್

ಶ್ರೀ ಶ್ರೀ ರವಿಶಂಕರ್ ವಿಷಯ ತಿಳಿಯದೇ ಇದ್ದವರು ಇಂದು ಇಡೀ ಪ್ರಪಂಚದಲ್ಲಿಯೇ ಇರಲಿಕ್ಕಿಲ್ಲ. ಅವರ ಮಂದಸ್ಮಿತ ಇಂದು ಬೆಂಗಳೂರಿನ ಗೋಡೆ-ಗೋಡೆಗಳ ಮೇಲೂ ರಾರಾಜಿಸುತ್ತಿದೆ.

ನೊಬೆಲ್ ಪ್ರಶಸ್ತಿ ನೀಡುವ ಸಮಿತಿಯ ಪ್ರಕಾರ, ಯಾವುದೇ ದೇಶದ ಯಾವುದೇ ಚುನಾಯಿತ ಪ್ರತಿನಿಧಿಯಿಂದ ಹಿಡಿದು ಕಾಲೇಜು ಪ್ರೊಫೆಸರುಗಳ ವರೆಗೆ ಯಾರು ಬೇಕಾದರೂ ಯಾರ ಹೆಸರನ್ನಾದರೂ ನೊಬೆಲ್ ಶಾಂತಿ ಪ್ರಶಸ್ತಿಗೆ ಸೂಚಿಸಬಹುದು. ಗುರೂಜಿಯವರ ಗ್ಲಾಮರ್ ವರ್ಚಸ್ಸು ಎಷ್ಟಿದೆಯೆಂದರೆ, ಅಮೆರಿಕದ ೪೩೫ ಪ್ರತಿನಿಧಿಗಳು ಮತ್ತು ೧೦೦ ಸೆನೆಟರ್‌ಗಳಲ್ಲಿ ಒಬ್ಬನೇ ಒಬ್ಬ ಪ್ರತಿನಿಧಿ ಗುರೂಜಿಯವರ ಹೆಸರನ್ನು ಸೂಚಿಸಿದ್ದೇ, ಗುರೂಜಿಯವರಿಗೆ ನೊಬೆಲ್ ಪ್ರಶಸ್ತಿ ಬಂದೇ ಬಿಟ್ಟಿತೇನೋ ಎಂಬಂತೆ ಭಾರತದಾದ್ಯಂತ ವರದಿಯಾಯಿತು.

ವಿಕಿಪೀಡಿಯಾ ಜ್ಞಾನಕೋಶದ ಪ್ರಕಾರ, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದಿದರೂ, ಪದವಿ ಪಡೆಯದೆ, ತಮ್ಮ ಆರ್ಟ್ ಆಫ್ ಲಿವಿಂಗ್ ಜೀವನ ಚರಿತ್ರೆಯ ಪ್ರಕಾರ ಕೇವಲ ಹದಿನೇಳನೆಯ ವಯಸ್ಸಿನಲ್ಲಿಯೇ ಆಧುನಿಕ ವಿಜ್ಞಾನದಲ್ಲಿ ಉನ್ನತ (ಆದರೆ, ಹೆಸರಿಲ್ಲದ) ಪದವಿ ಪಡೆದ ಪವಾಡ ಪುರುಷರಿವರು.

ಹಣ ಎಂಬುದು ಅಧ್ಯಾತ್ಮ ಮಾರ್ಗದಲ್ಲಿ ಮುನ್ನಡೆಯಲು ತೊಂದರೆ ನೀಡುವ ಹೆಣ ಭಾರದ ಪಾಪದ ಗಂಟು. ಈ ಭಾರದ ಗಂಟನ್ನು ಜನರ ಹೆಗಲಿನಿಂದ ತೆಗೆದು ತಾವು ಹೊರುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಪರೋಪಕಾರವನ್ನು ನಮ್ಮ ಗುರುಗಳೂ, ಮಠಾಧಿಪತಿಗಳೂ ಅನಾದಿಕಾಲದಿಂದ ಮಾಡುತ್ತಲೇ ಬಂದಿದ್ದಾರೆ. ಆದರೆ, ಬಹಳಷ್ಟು ಮಂದಿ ಗುರುಗಳು, ಬಡ ಜನರ ಅಷ್ಟೇನೂ ಭಾರವಿಲ್ಲದ ಗಂಟನ್ನು ಹೊರಲು ಸಿದ್ಧರಿದ್ದಾರೆಯೇ ಹೊರತು, ಇನ್ನೂ ಹೆಚ್ಚಿನ ಭಾರವನ್ನು ಹೊತ್ತು ನರಳುತ್ತಿರುವ ಮೇಲ್-ಮಧ್ಯಮ ವರ್ಗಗಳ ಕಡೆಗೆ ಗಮನ ಹರಿಸಿಲ್ಲ.

ಶ್ರೀ ಶ್ರೀಯವರು ಹಾಗಲ್ಲ. ವಿದ್ಯಾವಂತ ವರ್ಗ, ಇಂಗ್ಲೀಷ್ ಬಲ್ಲ ಮೇಲ್-ಮಧ್ಯಮವರ್ಗದವರ ಬಳಿ ಹಣದ ಗಂಟಿನ ಭಾರ ಹೆಚ್ಚಿರುವುದರಿಂದ, ಸನ್ಮಾರ್ಗ-ಸತ್ಸ್ಂಗ-ಸುದರ್ಶನ ಕ್ರಿಯೆಗಳ ಜರೂರತ್ತು ಈ ವರ್ಗಗಳಿಗೇ ಹೆಚ್ಚು ಇದೆಯೆಂದು ಮನಗಂಡು, ಈ ವರ್ಗಗಳಿಂದ ಹಣದ ಪಾಪದ ಭಾರವನ್ನು ಕಡಿಮೆ ಮಾಡಲು ಸೊಂಟಕ್ಕೆ ರೇಷ್ಮೆ ಉತ್ತರೀಯವನ್ನು ಕಟ್ಟಿ ನಿಂತಿದ್ದಾರೆ.

ಮಜಾವಾಣಿ ಮತ್ತು ಗುರೂಜಿಗಳ ಪ್ರೇಮ ಸಮ್ಮಿಲನಕ್ಕೆ ನಮ್ಮ ಬಹು ಜನ್ಮದ ಪೂಜಾ ಫಲವೇ ಕಾರಣ ಎಂಬುದರಲ್ಲಿ ಸಂಶಯವೇ ಇಲ್ಲ.

ಮಜಾವಾಣಿ: ಗುರೂಜಿಯವರಿಗೆ ನಮಸ್ಕಾರ.
ಗುರೂಜಿ: ನಮಸ್ಕಾರ.

ಮ.ವಾ.: ನೀವು "ಆರ್ಟ್ ಆಫ್ ಲಿವಿಂಗ್" ಎನ್ನುವ ಮಾತು ನಮಗೆ ತುಂಬಾ ಹಿಡಿಸಿತು. ಸತ್ತಿರುವವರ ಕಲೆಗಿಂತ ಬದುಕಿರುವವರ ಕಲೆಗೆ ಹೆಚ್ಚಿನ ಗೌರವ-ಪ್ರಾಧಾನ್ಯ ನೀಡಬೇಕೆಂಬ ನಿಮ್ಮ ಸಂಘಟನೆಯ ನಿಲುವನ್ನು ನಮ್ಮ ಪತ್ರಿಕೆ ಪೂರ್ಣವಾಗಿ ಬೆಂಬಲಿಸುತ್ತದೆ. ಕಲಾವಿದರಿಗೆ ಮರಣಾನಂತರ ಪ್ರಶಸ್ತಿ ನೀಡುವುದು ಒಳ್ಳೆಯ ಅಭ್ಯಾಸ ಅಲ್ಲ. ಇಂತಹ ಪ್ರಶಸ್ತಿಗಾಗಿಯೇ ಕಲಾವಿದರು ಮರಣದ ಮೊರೆ ಹೊಕ್ಕುವ ಅಪಾಯ ಇದೆ.

ಗುರೂಜಿ: ನಮ್ಮ ಸಂಘಟನೆಯ ಹೆಸರು "ಆರ್ಟ್ ಆಫ್ ಲಿವಿಂಗ್" ಅಂದರೆ "ಜೀವನ ಕಲೆ"; "ಆರ್ಟ್ ಆಫ್ ದಿ ಲಿವಿಂಗ್" ಅಲ್ಲ.

ಮ.ವಾ.: ಮೊದ-ಮೊದಲು "ಕಲೆಯೇ ಜೀವನ" ಎನ್ನುತ್ತಿದ್ದ ನೀವು, ಈಗ "ಜೀವನ ಕಲೆ"ಯ ಕಡೆಗೆ ತಿರುಗಿದ್ದು ಹೇಗೆ?

ಗುರೂಜಿ: ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ.  ಮುಂದೆ ಓದಿ »

ಮಜಾವಾಣಿ ವಿಶೇಷ ಅಂಕಣ:ಆತ ಮಂಗಗಳ ಗ್ರಹದಿಂದ, ಈತನೂ.. ಮಂಗಗಳ ಗ್ರಹದಿಂದ!

ಪ್ರಿಯ ಓದುಗರೇ, ಗಂಡ ಹೆಂಡಿರ ನಡುವಿನ ದೈನಂದಿನ ಸಮಸ್ಯೆಗಳ ಬಗ್ಗೆ ಅಮೆರಿಕದ ಜಾನ್ ಗ್ರೇ ಅವರು ಬರೆದಿರುವ ಪುಸ್ತಕ ಈಗ ಕನ್ನಡವನ್ನೂ ತಲುಪಿ ನಮ್ಮ ಪ್ರತಿಸ್ಪರ್ಧಿಯಾದ ದಟ್ಸ್ ಕನ್ನಡ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿರಬಹುದು. ನಮ್ಮ ದೃಷ್ಟಿಯಲ್ಲಿ, "ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ" ಮಾತ್ರ. ಇಬ್ಬರೂ ಮಲಗಿದ ಮೇಲಂತೂ, ಜಗಳಕ್ಕೆ ಪೂರ್ಣ ವಿರಾಮ - ಎದ್ದ ನಂತರ ಜಗಳ ಮತ್ತೆ ಮುಂದುವರೆಸುವವರೆಗೆ. ನಮ್ಮ ದೃಷ್ಟಿಯಲ್ಲಿ ಇಂತಹ ಕ್ಷುಲ್ಲಕ ವಿಚಾರಕ್ಕೆ ಪುಸ್ತಕ ಬರೆಯುವ ಅಥವಾ ಓದುವ ಅವಶ್ಯಕತೆ ಇಲ್ಲ.

ಆದರೆ, ಗಂಡು - ಗಂಡುಗಳ ನಡುವಿನ ಸಂಬಂಧ ಹಳಸಿದರೆ, ಗಂಡಾಂತರ ಕಾದಿದೆ ಎಂದೇ ಅರ್ಥ. ಉದಾಹರಣೆಗೆ ಅಮೆರಿಕದ ಅಧ್ಯಕ್ಷ ಬುಶ್ ಮತ್ತು ಇರಾಕಿನ ಮಾಜಿ ಸರ್ವಾಧಿಕಾರಿ ಸದ್ದಾಮ್ ಹುಸೇನರ ನಡುವಿನ ಜಗಳ ಇಬ್ಬರೂ ಹಲವಾರು ಬಾರಿ ಉಂಡು ಮಲಗಿದ್ದರೂ, ಮುಕ್ತಾಯವಾಗುವ ಯಾವುದೇ ಚಿಹ್ನೆಗಳು ಕಾಣುತ್ತಿಲ್ಲ. ಜೊತೆಗೇ ಈ ಗಂಡು-ಗಂಡುಗಳ ಜಗಳದ ಮಧ್ಯೆ ಹ್ಯಾಲಿಬರ್ಟನ್ ಶ್ರೀಮಂತವಾಯ್ತು ಎನ್ನುವಂತೆ, ಇಂಥಹ ಜಗಳಗಳು ಜಾಗತಿಕ ವ್ಯವಹಾರದ ಮೇಲೆ ಪರಿಣಾಮ ಬೀರುತ್ತವೆ.

ಇಡೀ ಜಗತ್ತಿನ ಅಳಿವಿಗೇ ಮುಖ್ಯವಾದ ಗಂಡು-ಗಂಡುಗಳ ನಡುವಿನ ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ಚಾರ್ಲ್‌ಟನ್ ಹೆಸ್ಟನ್ ರವರ "ಆತ ಮಂಗಗಳ ಗ್ರಹದಿಂದ, ಈತನೂ.. ಮಂಗಗಳ ಗ್ರಹದಿಂದ" ಪುಸ್ತಕದ ಕನ್ನಡ ಅನುವಾದವನ್ನು ಪ್ರಕಟಿಸಲು ನಮ್ಮ ಪತ್ರಿಕೆ ನಿರ್ಧರಿಸಿದೆ.  ಮುಂದೆ ಓದಿ »